LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

24 April 2026

ಗ್ರಾಮ ಪಂಚಾಯತಿ ವ್ಯಾಪ್ತಿಯ ಅಕ್ರಮ ಕಟ್ಟಡಗಳ ತೆರವು: ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಕಡ್ಡಾಯ

ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸರ್ಕಾರಿ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಸತಿ, ವಾಣಿಜ್ಯ ಮತ್ತು ಇತರ ಕಟ್ಟಡಗಳನ್ನು ನೆಲಸಮ (Demolition) ಮಾಡುವ ಮುನ್ನ ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರವು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 295/2022 ರ ಪ್ರಕರಣದಲ್ಲಿ ನೀಡಿರುವ ಮಾರ್ಗಸೂಚಿಗಳ ಅನ್ವಯ ಈ ಆದೇಶ ನೀಡಲಾಗಿದೆ.

ನೋಟೀಸ್ ಜಾರಿ ಮತ್ತು ಕಾಲಾವಕಾಶ

ಯಾವುದೇ ಅಕ್ರಮ ಕಟ್ಟಡವನ್ನು ತೆರವುಗೊಳಿಸುವ ಮುನ್ನ ಮಾಲೀಕರಿಗೆ ಕಡ್ಡಾಯವಾಗಿ 15 ದಿನಗಳ ಕಾಲಾವಕಾಶ ನೀಡಿ ನೋಟೀಸ್ ನೀಡಬೇಕು. ಈ ನೋಟೀಸನ್ನು ನೋಂದಾಯಿತ ಅಂಚೆಯ ಮೂಲಕ ಕಳುಹಿಸುವುದರ ಜೊತೆಗೆ, ಕಟ್ಟಡದ ಮುಂಭಾಗದಲ್ಲಿ ಎದ್ದು ಕಾಣುವಂತೆ ಅಂಟಿಸಬೇಕು. ಹಿಂದಿನ ದಿನಾಂಕಗಳನ್ನು ನಮೂದಿಸಿ ನೋಟೀಸ್ ನೀಡುವ ಅಕ್ರಮಗಳನ್ನು ತಡೆಯಲು, ನೋಟೀಸಿನ ಪ್ರತಿಯನ್ನು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ಕಳುಹಿಸಬೇಕು.

ಡಿಜಿಟಲ್ ಪೋರ್ಟಲ್ ಮತ್ತು ವಿಚಾರಣೆ

  • ಪ್ರತ್ಯೇಕ ತಂತ್ರಾಂಶ: ಪ್ರತಿ ಗ್ರಾಮ ಪಂಚಾಯತಿಯು ಅಕ್ರಮ ಕಟ್ಟಡಗಳ ಮಾಹಿತಿ, ನೋಟೀಸ್ ನೀಡಿದ ದಿನಾಂಕ ಮತ್ತು ವಿಚಾರಣಾ ಪ್ರಕ್ರಿಯೆಗಳನ್ನು ದಾಖಲಿಸಲು ಪ್ರತ್ಯೇಕ ಡಿಜಿಟಲ್ ಪೋರ್ಟಲ್ ಅಥವಾ ತಂತ್ರಾಂಶವನ್ನು ರೂಪಿಸಿಕೊಳ್ಳಬೇಕು.

  • ವೈಯಕ್ತಿಕ ವಿಚಾರಣೆ: ಜಿಲ್ಲಾಧಿಕಾರಿಗಳಿಂದ ಪ್ರಾಧಿಕೃತವಾದ ಅಧಿಕಾರಿಯು ಅಕ್ರಮ ಕಟ್ಟಡದ ಮಾಲೀಕರಿಗೆ ವಿವರಣೆ ಸಲ್ಲಿಸಲು ಅವಕಾಶ ನೀಡಿ 'ವ್ಯಕ್ತಿಗತ ವಿಚಾರಣೆ' (Personal Hearing) ನಡೆಸಬೇಕು.

  • ಅಂತಿಮ ಆದೇಶ: ವಿಚಾರಣೆ ಮುಗಿದ ನಂತರ ಹೊರಡಿಸುವ ಅಂತಿಮ ಆದೇಶದಲ್ಲಿ ಕಟ್ಟಡವನ್ನು ನೆಲಸಮ ಮಾಡುವುದು ಅನಿವಾರ್ಯವೇ ಅಥವಾ ದಂಡ ವಿಧಿಸಿ ರಾಜಿ (Compoundable) ಮಾಡಿಕೊಳ್ಳಲು ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.

ನೆಲಸಮ ಪ್ರಕ್ರಿಯೆ ಹೇಗಿರಬೇಕು?

ಅಂತಿಮ ಆದೇಶ ಹೊರಡಿಸಿದ 15 ದಿನಗಳ ನಂತರವೂ ಮಾಲೀಕರು ಕಟ್ಟಡ ತೆರವುಗೊಳಿಸದಿದ್ದಲ್ಲಿ ಅಥವಾ ನ್ಯಾಯಾಲಯದಿಂದ ತಡೆಯಾಜ್ಞೆ ಇಲ್ಲದಿದ್ದಲ್ಲಿ ಮಾತ್ರ ನೆಲಸಮ ಪ್ರಕ್ರಿಯೆ ಆರಂಭಿಸಬೇಕು. ಈ ಸಂದರ್ಭದಲ್ಲಿ:

  1. ಸ್ಥಳೀಯ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೆರವು ಪಡೆಯಬೇಕು.

  2. ನೆಲಸಮ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು.

  3. ಹಾಜರಿದ್ದ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರ್ ವರದಿ ಸಿದ್ಧಪಡಿಸಿ ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು.

ಅಧಿಕಾರಿಗಳಿಗೆ ಎಚ್ಚರಿಕೆ

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲದೆ, ನಿಯಮ ಬಾಹಿರವಾಗಿ ಕಟ್ಟಡ ನೆಲಸಮ ಮಾಡಿದರೆ ಉಂಟಾಗುವ ನಷ್ಟದ ಮೊತ್ತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಸರ್ಕಾರ ಎಚ್ಚರಿಸಿದೆ.

ಆದೇಶ:    ವೀಕ್ಷಿಸಿ / ಡೌನ್ಲೋಡ್ ಮಾಡಿ

No comments:

Post a Comment