ಕಲಬುರಗಿ: ಮುಂದಿನ ಎರಡು ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.
236 ಗ್ರಾಮಗಳಲ್ಲಿ ನೀರಿನ ಕೊರತೆ ಅಂದಾಜು
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 236 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಬಹುದೆಂದು ಅಂದಾಜಿಸಲಾಗಿದ್ದು, ಬಾಡಿಗೆ ಬೋರ್‌ವೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರ್‌ಓ ಪ್ಲಾಂಟ್‌ಗಳ ರಿಪೇರಿ ಅಗತ್ಯವಿದ್ದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಖಡಕ್ ಆದೇಶ ನೀಡಿದ್ದಾರೆ.
**ಪಂಪ್ ಆಪರೇಟರ್ ಕೊರತೆ ನೀಗಿಸಲು ತಕ್ಷಣ ಕ್ರಮ**
ಗ್ರಾಮೀಣ ಮಟ್ಟದಲ್ಲಿ ಪಂಪ್ ಆಪರೇಟರ್ ಇಲ್ಲದ ಕಾರಣ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಅಗತ್ಯ ಸಿಬ್ಬಂದಿ ನೇಮಕಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕೆಂದು ಸಚಿವರು ನಿರ್ದೇಶಿಸಿದ್ದಾರೆ.
**ಜೆಜೆಎಂ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ**
ದೇಶದಲ್ಲಿ ಏಕೈಕ ರಾಜ್ಯವಾಗಿ ಕರ್ನಾಟಕ ಸರ್ಕಾರ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗೆ ಅನುದಾನ ಒದಗಿಸುತ್ತಿದ್ದರೂ ಅಧಿಕಾರಿಗಳು ಗುತ್ತಿಗೆದಾರರ ಹಿಂದೆ ಬಿದ್ದು ಕೆಲಸ ಪೂರ್ಣಗೊಳಿಸದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
**ವಿದ್ಯುತ್ ಕಡಿತ ನಿಲ್ಲಿಸಲು ಜೆಸ್ಕಾಂಗೆ ಸೂಚನೆ**
ಕುಡಿಯುವ ನೀರು ಸರಬರಾಜು ಮಾಡುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸದಂತೆ ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದ್ದು, ಹೊಸ ಬೋರ್‌ವೆಲ್‌ಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ನೀಡಬೇಕೆಂದು ತಾಕೀತು ಮಾಡಿದ್ದಾರೆ.
**ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಗೂ ಒತ್ತು**
ಗ್ರಾಮೀಣ ಭಾಗದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಘನತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಯೋಜನೆ ರೂಪಿಸಲು ಅನುದಾನ ತರುವ ಜವಾಬ್ದಾರಿ ತಮ್ಮದೆಂದು ಭರವಸೆ ನೀಡಿದರು. ತ್ಯಾಜ್ಯ ನಿರ್ವಹಣೆಯನ್ನು ಆದ್ಯತೆಯಾಗಿ ಪರಿಗಣಿಸದೆ ಗ್ರಾಮಗಳ ಸ್ವಚ್ಛತೆ ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ಬಾರಿ ಗ್ರಾಮ ಪಂಚಾಯತಿಗಳಿಂದ ₹1,397 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಮುಂದಿನ ಸಾಲಿನಲ್ಲಿ ಇದನ್ನು ₹2,000 ಕೋಟಿಗೆ ಹೆಚ್ಚಿಸಬೇಕೆಂಬ ಗುರಿ ನಿಗದಿಪಡಿಸಲಾಗಿದೆ. ಕುಡಿಯುವ ನೀರು, ನೈರ್ಮಲ್ಯ, ಶೌಚಾಲಯ ಸೇರಿದಂತೆ ಗ್ರಾಮೀಣ ಅಭಿವೃದ್ಧಿಯ ಎಲ್ಲ ವಿಷಯಗಳ ಕಡೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಚಿವರು ಒತ್ತಾಯಿಸಿದ್ದಾರೆ.
No comments:
Post a Comment