LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

31 March 2026

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ: ಸ್ಥಳ ನಿಯುಕ್ತಿ ನೀಡದಿದ್ದರೆ ಅಧಿಕಾರಿಗಳ ವೇತನದಿಂದಲೇ ಕಡಿತ – ಸರ್ಕಾರದ ಖಡಕ್ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಅನವಶ್ಯಕ ಆರ್ಥಿಕ ಹೊರೆಯನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ನೌಕರನನ್ನು ಸ್ಥಳ ನಿಯುಕ್ತಿ (Posting) ನೀಡದೆ ವರ್ಗಾವಣೆ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಉಚ್ಚ ನ್ಯಾಯಾಲಯದ ತೀರ್ಪು ಜಾರಿ
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: W.P. No.35777/2025 ರಲ್ಲಿ ನೀಡಿದ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಈ ಆದೇಶ ಹೊರಡಿಸಿದ್ದಾರೆ. ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಶ್ರೀ ಕೆ. ಅರುಣ್ ಕುಮಾರ್ ಅವರಿಗೆ ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸರ್ಕಾರದ ನಡೆಯನ್ನು ಟೀಕಿಸಿತ್ತು.

ಸುತ್ತೋಲೆಯ ಪ್ರಮುಖ ಅಂಶಗಳು:
 * ಸ್ಥಳ ನಿಯುಕ್ತಿ ಕಡ್ಡಾಯ: ಯಾವುದೇ ಸರ್ಕಾರಿ ನೌಕರನನ್ನು ವರ್ಗಾಯಿಸುವಾಗ ಅವರಿಗೆ ತಕ್ಷಣವೇ ಪರ್ಯಾಯ ಹುದ್ದೆಯ ಸ್ಥಳ ನಿಯುಕ್ತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
 * ಕರ್ತವ್ಯದಿಂದ ಮುಕ್ತಿ ಇಲ್ಲ: ಒಂದು ವೇಳೆ ಸ್ಥಳ ನಿಯುಕ್ತಿ ನೀಡದೆ ವರ್ಗಾವಣೆ ಮಾಡಿದರೆ, ಅಂತಹ ನೌಕರನನ್ನು ಅವರು ಈಗಿರುವ ಹುದ್ದೆಯಿಂದ ಬಿಡುಗಡೆ ಮಾಡುವಂತಿಲ್ಲ.
 * ವರದಿ ಒಪ್ಪಿಸುವುದು 'ಸ್ಥಳ ನಿಯುಕ್ತಿ'ಯಲ್ಲ: ವರ್ಗಾವಣೆಯಾದ ಅಧಿಕಾರಿ/ನೌಕರರನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಮುಂದೆ ವರದಿ ಮಾಡಿಕೊಳ್ಳುವಂತೆ ಸೂಚಿಸುವುದು 'ಸ್ಥಳ ನಿಯುಕ್ತಿ' ಎಂದು ಪರಿಗಣಿಸಲ್ಪಡುವುದಿಲ್ಲ.
 * ಅಧಿಕಾರಿಗಳೇ ಜವಾಬ್ದಾರರು: ನಿಯಮ ಮೀರಿ ಸ್ಥಳ ನಿಯುಕ್ತಿ ನೀಡದೆ ನೌಕರರನ್ನು ಕಡ್ಡಾಯ ನಿರೀಕ್ಷಣೆಯಲ್ಲಿ (Compulsory Waiting) ಇರಿಸಿದಲ್ಲಿ, ಆ ಅವಧಿಯ ವೇತನ ಮತ್ತು ಭತ್ಯೆಯನ್ನು ವರ್ಗಾವಣೆ ಮಾಡಿದ ಸಕ್ಷಮ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ವೇತನದಿಂದಲೇ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಸರ್ಕಾರದ ಆತಂಕವೇನು?
ಸ್ಥಳ ನಿಯುಕ್ತಿ ನೀಡದೆ ವರ್ಗಾವಣೆ ಮಾಡುವುದರಿಂದ ನೌಕರರು ಯಾವುದೇ ಕೆಲಸ ನಿರ್ವಹಿಸದಿದ್ದರೂ ಅವರಿಗೆ ವೇತನ ಹಾಗೂ ಭತ್ಯೆಗಳನ್ನು ಪಾವತಿಸಬೇಕಾಗುತ್ತದೆ. ಇದು ಸರ್ಕಾರದ ಬೊಕ್ಕಸಕ್ಕೆ ಅನವಶ್ಯಕ ಆರ್ಥಿಕ ಹೊರೆಯಾಗುವುದಲ್ಲದೆ, ಸಾರ್ವಜನಿಕ ಕೆಲಸಗಳ ನಿರ್ವಹಣೆಯಲ್ಲೂ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

No comments:

Post a Comment