ರಾಯಚೂರು: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ (CEO) ಶ್ರೀ ಈಶ್ವರ ಕಾಂದೂ ಅವರು ಪೋಷಕರಿಗೆ ವಿಶೇಷ ಪತ್ರವೊಂದನ್ನು ಬರೆದಿದ್ದಾರೆ. ಪರೀಕ್ಷಾ ಸಮಯದಲ್ಲಿ ಮಕ್ಕಳನ್ನು ಸಿದ್ಧಪಡಿಸುವ ಕುರಿತು ಇರುವ ಈ ಪತ್ರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಮನೆ ಮನೆಗೆ ತಲುಪಿಸುತ್ತಿದ್ದಾರೆ.
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಓ ಅವರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಸಿಇಓ ಅವರ ಸಂದೇಶವನ್ನು ಪೋಷಕರಿಗೆ ತಲುಪಿಸಿದರು.
ಜಾಗೃತಿ ಅಭಿಯಾನದ ಪ್ರಮುಖ ಅಂಶಗಳು:
- ಮೊಬೈಲ್ ಮತ್ತು ಟಿವಿ ನಿಯಂತ್ರಣ: ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್ ಚಟಕ್ಕೆ ಬೀಳದಂತೆ ಪೋಷಕರು ನಿಗಾವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
- ಆರೋಗ್ಯಕರ ಜೀವನಶೈಲಿ: ಓದಿನ ಜೊತೆಗೆ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು. ಕನಿಷ್ಠ 6 ರಿಂದ 7 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವಂತೆ ನೋಡಿಕೊಳ್ಳುವುದು ಅತ್ಯಗತ್ಯ.
ಒತ್ತಡ ಮುಕ್ತ ಪರಿಸರ: ಮಕ್ಕಳಿಗೆ ಅಂಕಗಳ ಬಗ್ಗೆ ಒತ್ತಡ ಹೇರದೆ, ಅವರು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ಸಿಇಓ ಈಶ್ವರ ಕಾಂದೂ ಅವರು ಪತ್ರದ ಮೂಲಕ ಕರೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳು ನೇರವಾಗಿ ಮನೆಗೆ ಬಂದು ಮಕ್ಕಳ ಓದಿನ ಬಗ್ಗೆ ವಿಚಾರಿಸಿ, ಧೈರ್ಯ ತುಂಬುತ್ತಿರುವುದು ಗಬ್ಬೂರು ಭಾಗದ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಂತಸ ತಂದಿದೆ.
No comments:
Post a Comment