ಬೆಂಗಳೂರು, ನವೆಂಬರ್ 5, 2025:
ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯತಿಗಳ ಆಡಳಿತದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಕರಡು ನಿಯಮಗಳನ್ನು ಪ್ರಕಟಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಸಂಬಂಧ ನವೆಂಬರ್ 5, 2025 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಏಳು ದಿನಗಳಲ್ಲಿ ಸಲಹೆ, ಆಕ್ಷೇಪಣೆ ಸಲ್ಲಿಸಲು ಸೂಚನೆ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಸರ್ಕಾರವು ಈ ಕರಡನ್ನು ತಯಾರಿಸಿದೆ. ಈ ಕರಡು ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳು, ಇದು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಏಳು ದಿನಗಳೊಳಗಾಗಿ ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿಯವರಿಗೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾಗುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಸರ್ಕಾರವು ಪರಿಗಣಿಸಲಿದೆ.
ಇ-ಸ್ವತ್ತು ಬಳಕೆಗೆ ಮಹತ್ವ
ಪ್ರಸ್ತಾವಿತ ನಿಯಮಗಳಲ್ಲಿ ಗ್ರಾಮ ಪಂಚಾಯಿತಿಗಳ ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆಗೆ ಒಳಪಡುವ ಆಸ್ತಿ ವಿವರಗಳನ್ನು ನಮೂನೆ 9, ನಮೂನೆ 11ಎ ಮತ್ತು ನಮೂನೆ - 11ಬಿ ಗಳಲ್ಲಿ ತಂತ್ರಾಂಶದ (ಸಾಮಾನ್ಯವಾಗಿ ಇ-ಸ್ವತ್ತು) ಮೂಲಕ ನಿರ್ವಹಿಸಿ, ನಮೂನೆ 11ಎ ಮತ್ತು 11ಬಿ ಗಳನ್ನು ಆಸ್ತಿಗಳ ವರ್ಗೀಕರಣಕ್ಕನುಗುಣವಾಗಿ ತಂತ್ರಾಂಶದ ಮೂಲಕವೇ ವಿತರಿಸತಕ್ಕದ್ದು.
ಪ್ರಮುಖ ಷರಾ: ಯಾವುದೇ ಆಸ್ತಿಗೆ ನಮೂನೆಯನ್ನು ನೀಡುವುದರಿಂದ ಅಥವಾ ತೆರಿಗೆ ಸಂಗ್ರಹಿಸುವುದರಿಂದ, ಆ ಕಟ್ಟಡ ಅಥವಾ ಖಾಲಿ ಭೂಮಿಗೆ ಮಾಡಿದ ಯಾವುದೇ ಕಾನೂನು ಉಲ್ಲಂಘನೆಯು ಸಕ್ರಮಗೊಂಡಿದೆ ಎಂದು ಭಾವಿಸಬಾರದು. ಅಂತಹ ಆಸ್ತಿಗಳನ್ನು ಹೊಂದಿರುವ ವ್ಯಕ್ತಿಗಳು ಕಾನೂನು ಉಲ್ಲಂಘನೆಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಅಡಿಯಲ್ಲಿ ಕಾನೂನುಬದ್ಧ ಕ್ರಮಕ್ಕೆ ಯಾವಾಗಲೂ ಹೊಣೆಗಾರರಾಗಿರುತ್ತಾರೆ ಎಂದು ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಅಧಿಸೂಚನೆಯು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಅವರಿಂದ ಪ್ರಕಟವಾಗಿದೆ.
No comments:
Post a Comment